ಅರೇಟಿಡೇ
ಚಿಟ್ಟೆಗಳ ಕುಲ, ಹುಲಿಪಟ್ಟೆ ಚಿಟ್ಟೆಗಳು (ಟೈಗರ್ ಮಾತ್ಸ್), ಪದಾತಿ ಚಿಟ್ಟೆಗಳು (ಪೂಟ್‍ಮನ್ ಮಾತ್ಸ್) ಈ ಕುಲಕ್ಕೆ ಸೇರಿವೆ. ಇವು ಸಣ್ಣದರಿಂದ ಮಧ್ಯಮಗಾತ್ರದವರೆಗಿನ ಸ್ಥೂಲ ಶರೀರದವು. ಎದ್ದು ಕಾಣುವ ಪ್ರಕಾಶಮಾನವಾದ ಚಿಕ್ಕೆ ಅಥವಾ ಪಟ್ಟೆಗಳನ್ನು ಹೊಂದಿವೆ. ರೆಕ್ಕೆಗಳು ತಕ್ಕ ಮಟ್ಟಿಗೆ ಅಗಲವಾಗಿದ್ದು ಚಿಟ್ಟೆ ಕುಳಿತಾಗ ಮನೆಯ ಛಾವಣಿ ರೀತಿಯಲ್ಲಿ ಹೊಟ್ಟೆಯ ಮೇಲೆ ಕವುಚಿಕೊಳ್ಳುತ್ತದೆ. ಒಂದೆರಡು ಜಾತಿಗಳನ್ನು ಬಿಟ್ಟರೆ, ಸಾಮಾನ್ಯವಾಗಿ ಈ ಚಿಟ್ಟೆಗಳ ಹಾರಾಟ ರಾತ್ರಿಯ ಕಾಲದಲ್ಲಿ, ದೀಪದ ಬೆಳಕು ಇವನ್ನು ಆಕರ್ಷಸುತ್ತದೆ. ಇವು ಪ್ರಪಂಚದ ಎಲ್ಲ ಭಾಗಗಳಲ್ಲಿದ್ದರೂ ಉಷ್ಣದೇಶಗಳಲ್ಲಿ ಇವುಗಳ ಸಂಖ್ಯೆ ಹೆಚ್ಚು. ಈ ಕುಲದ ಚಿಟ್ಟೆಗಳು ಹೆಚ್ಚಾಗಿ ನಾಕ್ಟುಯಿಡೆ ಕುಲದವರನ್ನು ಹೋಲಿದರೂ ಇವುಗಳ ಹಿಂಭಾಗದ ರೆಕ್ಕೆಗಳಲ್ಲಿ ಕ್ಯುಬೀಟಸ್ ನರ ನಾಲ್ಕು ಕವಲಾಗಿದೆ. ನಾಕ್ಟುಯಿಡೆ ಕುಲದ ಚಿಟ್ಟೆಗಳ ಹಿಂದಿನ ರೆಕ್ಕೆಗಳಲ್ಲಿ ಕ್ಯುಬಿಟಸ್ ನರ ಮೂರು ಕವಲಾಗಿದೆ. ಕೆಲವು ಜಾತಿಯ ಆಕ್ರ್ಟೈಯಿಡ್ ಚಿಟ್ಟೆಗಳು ಶಬ್ದವನ್ನುಂಟುಮಾಡಬಲ್ಲವು. ಚಿಟ್ಟೆಗಳ ಪ್ರಭೇದಗಳ ಸಂಖ್ಯೆ 3,500 ಕ್ಕಿಂತಲೂ ಹೆಚ್ಚು. ಮರಿಗಳ ಮೈಮೇಲೆ ತುಂಬ ಕೂದಲು ಇದೆ. ತೆಳ್ಳನೆಯ ಕೀಟಕೋಶದಲ್ಲಿ ಮರಿಗಳ ಕೆಲವು ಕೂದಲು ಕೋಶವಾಗುತ್ತವೆ. ಅರೇಟಿಡೇ ಕುಲಕ ಉಪಕುಲಗಳು: 1 ಲಿಥೋಸಿನಿ; 2 ನಿಕ್ಟಿಯೋಲಿನಿ, 3 ಆಕ್ರ್ಟೈಯಿನಿ, ಲಿಥೋಸಿನಿ ಉಪಕುಲಕ್ಕೆ ಸೇರಿದ ಈ ಪದಾತಿ ಚಿಟ್ಟೆಗಳು ಗಾತ್ರದಲ್ಲಿ ಸಣ್ಣ; ಶರೀರ ನೀಳವಾಗಿದ್ದು ಮಂಕು ಬಣ್ಣದ್ದಾಗಿದೆ. ಮುಂಬೆಳಕಿನಲ್ಲಿ ಮತ್ತು ಬೆಳಗಿನ ಕಾಲದಲ್ಲಿ ಈ ಚಿಟ್ಟೆ ಹಾರಾಡುತ್ತದೆ. ಮುಂದಿನ ರೆಕ್ಕೆಗಳು ಉದ್ದ ಮತ್ತು ನೀಳವಾಗಿವೆ. ಈ ಉಪಕುಲದ ಚಿಟ್ಟೆಯ ಮರಿಗಳಿಗೆ ಸರಳ ಕಣ್ಣು ಇಲ್ಲ. ಮೈಮೇಲೆ ಕೂದಲು ಕಡಿಮೆ. ಮರಗಳ ಮತ್ತು ಬಂಡೆಗಳ ಮೇಲೆ ಬೆಳೆಯುವ ಕಲ್ಲು ಹೂವುಗಲೇ (ಲೈಕೆನ್ಸ್) ಮರಿಗಳಿಗೆ ಆಹಾರ. ನಿಕ್ಟಿಯೋಲಿನಿ ಉಪಕುಲಕ್ಕೆ ಸೇರಿದ ಚಿಟ್ಟೆಗಳ ಬಣ್ಣ ಸಾಮಾನ್ಯವಾಗಿ ಹಸಿರು, ಇವುಗಳ ಮರಿಗಳ ಮೈಮೇಲೆ ಕೂದಲು ಬಲು ಕಡಿಮೆ. ಕೀಟಕೋಶಗಳು ದೋಣಿಯ ಆಕಾರವಾಗಿರುತ್ತದೆ. ಬೆಂಡೆಕಾಯಿಗೆ ಬೀಳುವ, ಈರಿಯಸ್, ಫೇಬಿಯಾ ಮತ್ತು ಈರಿಯಾಸ್ ಇನ್ಸುಲಾನ ಎಂಬ ಚಿಟ್ಟೆಗಳು ಒಳ್ಳೆಯ ಉದಾಹರಣೆ, ಉಪಕುಲ ಆಕ್ರ್ಟೈಯಿನಿಗೆ ಸೇರಿದ ಚಿಟ್ಟೆಗಳು ಪ್ರಕಾಶಮಾನವಾದ ನಾನಾ ಮಾದರಿಯ ಬಣ್ಣದಿಂದ ಕೂಡಿವೆ. ಇವುಗಳನ್ನು ಹುಲಿಪಟ್ಟೆ ಚಿಟ್ಟೆಗಳೆಂದು ಕರೆಯಲು ಇದೇ ಕಾರಣ. ಮರಿಗಳಿಗೆ ಮೈತುಂಬ ಕೂದಲು. ಸರಳ ಕಣ್ಣುಗಳಿವೆ. ಈ ಚಿಟ್ಟೆಗಳ ಮರಿಗಳು ಮರಗಿಡಗಳ ಎಲೆಗಳನ್ನೂ ಬೆಳೆಗಳನ್ನೂ ತಿಂದು ಹಾಳುಮಾಡುತ್ತವೆ. ಪ್ರಪಂಚದ ನಾನಾ ಭಾಗಗಳಲ್ಲಿ ಕಂಡು ಬಂದಿರುವ ಯುಟಿಥೀಸಿಯ ಪಲ್‍ಚಲ್ಲಾ ಚಿಟ್ಟೆಯ ಮರಿ ಭಾರತದಲ್ಲಿ ಅಪಸೆಣಬು (ಸನ್‍ಹೆಂಪ್) ಗಿಡದ ಎಲೆಗಳನ್ನು ತಿಂದು ಹಾಳು ಮಾಡುತ್ತವೆ. ಇದರ ಮುಂದಿನ ರೆಕ್ಕೆಗಳು ಬೂದು ಬಿಳುಪಾಗಿದ್ದು ಸಣ್ಣ ಕಪ್ಪು ಮತ್ತು ಕೆಂಪು ಮಚ್ಚೆಗಳನ್ನು ಹೊಂದಿವೆ. ಹಿಂದಿನ ರೆಕ್ಕೆಗಳ ನೀಲಿ ಮಿಶ್ರವಾದ ಬಿಳುಪಾಗಿದ್ದು ಅಲ್ಲಲ್ಲಿ ದೊಡ್ಡ ಕಪ್ಪು ಮಚ್ಚೆಗಳಿವೆ. ಬಾರತದಲ್ಲಿ ಈ ಉಪಕುಲಕ್ಕೆ ಸೇರಿದ ಮತ್ತೆ ಕೆಲವು ಜಾತಿಯ ಚಿಟ್ಟೆಗಳ ಚಿಟ್ಟೆಗಳು ಧಾನ್ಯದ ಬೆಳೆಗಳನ್ನೂ ಎಣ್ಣೆ ಬೀಜಗಳ ಬೆಳೆಗಳನ್ನೂ ಹಾಳುಮಾಡುತ್ತವೆ. ಅಮ್‍ಸೆಕ್ಟ ಆಲ್ಟಿಸ್ಟ್ರೈಗಾ, ಕಡಲೆಕಾಯಿ, ತೊಗರಿ, ಜೋಳ ಮುಂತಾದ ಬೆಳೆಗಳಿಗೂ ಡೈಯಾಕ್ರಿಸಿಯಾ ಒಬ್ಲಿಕ್ವ ಮತ್ತು ಎಸ್ಟಿಗ್ಮೀನ್ ಲಾಕ್ಟೀನಿಯ ರಾಗಿ ಬೆಳೆಗೂ ಪೆರಿಕೇಲಿಯಾ ರಿಸಿನ ಹರಳು ಮತ್ತು ಬಾಳೆಯ ಗಿಡಕ್ಕೂ ಅಂಟಿಕೊಂಡು ವಿಪರೀತ ಹಾನಿಯನ್ನುಂಟುಮಾಡುತ್ತವೆ.
		
(ಟಿ.ಎಸ್.ಟಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ